ಮೂತ್ರಪಿಂಡನಾಳ -
ಬಲ ಎಡ ಮೂತ್ರಪಿಂಡಗಳಿಂದ ಮೂತ್ರವನ್ನು ಕೆಳಗಿರುವ ಮೂತ್ರಕೋಶಕ್ಕೆ ಒಯ್ಯುವ ಅನುಕ್ರಮನಾಳಗಳು (ಯೂರಿಟರ್ಸ್).  ಪ್ರತಿಯೊಂದು ನಾಳದಲ್ಲಿಯೂ ನಾಲ್ಕು ಭಾಗಗಳಿವೆ.  ಪಿಂಡದ ನಾಭಿಭಾಗ ಮೂತ್ರಪಿಂಡನಾಳದ ಉದರಭಾಗ, ಶ್ರೋಣಿಭಾಗ, ಮೂತ್ರಕೋಶ ಭಿತ್ತಿಭಾಗಗಳು.  ಕೊನೆಯ ಮೂರು ಭಾಗಗಳನ್ನೇ ಸಾಮಾನ್ಯವಾಗಿ ಮೂತ್ರಪಿಂಡನಾಳ ಎನ್ನುವುದು.  ಇವುಗಳ ವ್ಯಾಸ ಹೆಚ್ಚು ಕಡಿಮೆ ಒಂದೇ.  ಮೂತ್ರ ಪಿಂಡಭಾಗ 7 ರಿಂದ 13 ಲಾಳಿಕೆ ಆಕಾರದ (ಫನಲ್) ಕೊನೆಗಳಿರುವ ಕಿರುಕೇಲಿಕ್ಸ್ ನಾಳಗಳಿಂದ ಪ್ರಾರಂಭವಾಗುತ್ತದೆ.  ಇವು ಮೂತ್ರಪಿಂಡದ ತೊಟ್ಟುಗಳನ್ನು ಅಂತುಕೊಂಡಿವೆ.  ಕಿರುಕೇಲಿಕ್ಸ್‍ಗಳು ಕೂಡಿ 2 ಅಥವಾ 3 ಹ್ರಸ್ವ ದೊಡ್ಡ ಕೇಲಿಕ್ಸ್‍ಗಳಾಗಿರುತ್ತವೆ.  ಇವೂ ಒಂದಾಗಿ ಮೂತ್ರಪಿಂಡನಾಳದ ಪನ್ನಾಲೆಯಂಥ ಶ್ರೋಣಿಯಾಗುತ್ತದೆ.  ಶ್ರೋಣಿಯ ಮೇಲ್ಭಾಗ ಮೂತ್ರಪಿಂಡ ನಾಭಿಯಲ್ಲಿದೆ; ಕೆಳಭಾಗ ನಾಭಿಕುಳಿಯ ಹೊರಗಿದೆ.  ಸಾಧಾರಣವಾಗಿ ಎದೆಗೂಡಿನ ಮೇಲಿನ ಕೋಣಕ್ಕೂ ಹೊಕ್ಕಳಿಗೂ ಮಧ್ಯ ಮಟ್ಟದಲ್ಲಿ ಶ್ರೋಣಿ ಸರಿಯಾದ ಮೂತ್ರಪಿಂಡನಾಳವಾಗುತ್ತದೆ.  ಸರಿಯಾದ ಮೂತ್ರಪಿಂಡನಾಳದ ಉದ್ದ 28-34 ಸೆಂಮೀ.  ಬಲಗಡೆಯದು ಎಡಗಡೆಯದಕ್ಕಿಂತ 1 ಸೆಂಮೀ ಕೆಳಗಿದೆ.  ಮೂತ್ರನಾಳದ ಭಿತ್ತಿ ದಪ್ಪವಿದ್ದು ನಾಳಮಾರ್ಗ (ಲೂಮೆನ್) ಇಕ್ಕಟ್ಟಾಗಿದೆ.  ವ್ಯಾಸ 1 ಮಿಮೀನಿಂದ 1 ಸೆಂಮೀವರೆಗೆ ವಿವಿಧ ಮಟ್ಟಗಳಲ್ಲಿ ವ್ಯತ್ಯಾಸಗೊಳ್ಳುತ್ತದೆ.  ಬೆನ್ನುಮೂಳೆಯ ಪಕ್ಕದಲ್ಲಿರುವ ತೊಡೆ ಮಡಿಸುವ ಸ್ನಾಯು (ದೊಡ್ಡ ಸೋಯಾಸ್) ಮುಂದೆ ಇಳಿಯುತ್ತ ಅದರ ಹೊರಪಕ್ಕದಿಂದ ಒಳಪಕ್ಕಕ್ಕೆ ದಾಟುತ್ತ ಶ್ರೋಣಿಯನ್ನು ಸೇರಿ ಮೂತ್ರಕೋಶದೊಳಕ್ಕೆ ತೆರೆಯುತ್ತದೆ.  ಇದೇ ಉದರಭಾಗದ ಮೂತ್ರಪಿಂಡನಾಳ, ಉದರ ಪರಿವೇಷ್ಟ ಇದನ್ನು ಕವುಚಿದೆ.  ಬಲಪಿಂಡನಾಳ ಬಲ ಅಯೋರ್ಟ ಶಾಖೆಯನ್ನೂ ಎಡಪಿಂಡನಾಳ ಎಡ ಶಾಖೆಯನ್ನೂ ದಾಟಿ ಶ್ರೋಣಿಗೆ ಇಳಿಯುತ್ತದೆ.  ಶ್ರೋಣಿ ಭಾಗದ ಮೂತ್ರಪಿಂಡನಾಳ ಶ್ರೋಣಿಯ ಪಕ್ಕ ಭಿತ್ತಿಮೇಲಿಳಿದು ಮೂತ್ರ ಕೋಶಭಾಗದ ಮಟ್ಟದಲ್ಲಿ ಮುಂದಕ್ಕೆ ಸರಿದು ಕೋಶದ ಹಿಂಭಿತ್ತಿಯ ಮೂಲ 2 ಸೆಂಮೀ ನಷ್ಟು ಓರೆಯಾಗಿ ಸಾಗಿ ಕೋಶದೊಳಕ್ಕೆ ತೆರೆಯುತ್ತದೆ.  ಮೂತ್ರಕೋಶದೊಳಗೆ ಬಲ ಎಡ ಮೂತ್ರಪಿಂಡನಾಳರಂಧ್ರಗಳ ಅಂತರ ಖಾಲಿಮೂತ್ರಕೋಶದಲ್ಲಿ 2.5 ಸೆಂಮೀ ಮತ್ತು ಪೂರ್ತಿ ತುಂಬಿದ ಕೋಶದಲ್ಲಿ 5 ಸೆಂಮೀ.  ಕೋಶಭಿತ್ತಿಯಲ್ಲಿ ಓರೆಯಾಗಿ ತೂರುವುದರಿಂದ ಕೋಶ ತುಂಬಿದಷ್ಟೂ ನಾಳದ ಕೊನೆಯ ಮೇಲಿನ ಒತ್ತಡ ಹೆಚ್ಚುತ್ತ ದ್ವಾರ ಮುಚ್ಚಿದಂತಾಗಿ ಮೂತ್ರನಾಳದೊಳಕ್ಕೆ ಹಿನ್ನುಗ್ಗುವುದನ್ನು ನಿರೋಧಿಸುತ್ತದೆ.

	ಪಿಂಡನಾಳದಲ್ಲಿ ಮೂರು ಮಟ್ಟಗಳಲ್ಲಿ ಸಂಪೀಡನವಾಗಿ ಅದರ ಕುಳಿಕಿರಿದಾಗಿದೆ.  ಪಿಂಡನಾಳದ ಶ್ರೋಣಿಭಾಗ ಉದರಭಾಗಗಳ ಸಂಧಿಯಲ್ಲಿ ಸರಾಸರಿ ವ್ಯಾಸ 2 ಮಿಮೀ.  ಉದರ ಭಾಗ ಅಯೋರ್ಟದ ಬಲ ಅಥವಾ ಎಡ ಅಂತ್ಯ ಶಾಖೆಯನ್ನು ದಾಟುವಾಗ ಇರುವ ಸಂಪೀಡನದ ವ್ಯಾಸ 4 ಮಿಮೀ.  ಪಿಂಡನಾಳದ ಕೋಶ ಪ್ರವೇಶದಲ್ಲಿ ಭಿತ್ತಿ ಭಾಗದ ವ್ಯಾಸ ಸುಮಾರು 1 ರಿಂದ 5 ಮಿಮೀ.  ಮೂರು ಸಂಪೀಡನಗಳ ನಡುವೆ ಪಿಂಡನಾಳದ ಉದರಭಾಗದ ವ್ಯಾಸ ಸರಾಸರಿ 10ಮಿಮೀ ಮತ್ತು ಶ್ರೋಣಿ ಭಾಗದಲ್ಲಿ ಸರಾಸರಿ 5 ಮಿಮೀ.  ಸಂಪೀಡನ ಕಂಡುಬರುವ ಸ್ಥಳಗಳಲ್ಲಿ ಮೂತ್ರ ಅಶ್ಮರಿಗಳು ನಾಳದ ಮೂಲಕ ಸಾಗುವಾಗ ಸಿಕ್ಕಿಹಾಕಿಕೊಂಡು ಮೂತ್ರ ಸಾಗಣೆಗೆ ಅಡ್ಡಿಯಾಗುವುದಲ್ಲದೆ ಅತಿನೋವಿಗೂ ಕಾರಣವಾಗುತ್ತವೆ.  ಸ್ತ್ರೀಯರಲ್ಲಿ ಪಿಂಡನಾಳದ ಉದರಭಾಗ ಗಂಡಿನಲ್ಲಿ ಇರುವಂತಿದೆ.  ಶ್ರೋಣಿಭಾಗ ಸ್ತ್ರೀಜನನಗ್ರಂಥಿ ಗುಳಿಯ ಹಿಂದಿನ ಎಲ್ಲೆ.  ಗುಳಿಯಿಂದ ನಾಳ ಒಳಪಕ್ಕಕ್ಕೆ ಮತ್ತು ಮುಂದಕ್ಕೆ ಹೊರಟು ಗರ್ಭಕೋಶ ಕಂಠದ ಮತ್ತು ಯೋನಿಯ ಮೇಲ್ಭಾಗದ ಪಕ್ಕದಲ್ಲಿ 2 ಸೆಂಮೀ ದೂರದಲ್ಲಿ ದಾಟಿ ಮೂತ್ರಕೋಶವನ್ನು ಸೇರುತ್ತದೆ.  ಇದಕ್ಕೆ ಮೊದಲು 2.5 ಸೆಂಮೀನಷ್ಟು ಅದರ ಜೊತೆಯಲ್ಲಿ ಗರ್ಭಕೋಶಧಮನಿ ಇರುತ್ತದೆ.

	ವ್ಯತ್ಯಾಸಗಳು : ಪಿಂಡನಾಳದ ಮೇಲ್ಭಾಗ ಎರಡಾಗಿ ಕವಲೊಡೆದಿರಬಹುದು.  ಅಪರೂಪವಾಗಿ ಇಡೀನಾಳವೇ ಎರಡಾಗಿ ಕೋಶದ ಒಂದು ಅಥವಾ ಎರಡು ಪಕ್ಕಗಳಲ್ಲೂ ಎರಡೆರಡು ಪಿಂಡನಾಳ ರಂಧ್ರಗಳಿರಬಹುದು.  ಈ ವ್ಯತ್ಯಾಸಗಳಿಂದ ಹೆಚ್ಚು ಕೆಡುಕೇನೂ ಇರುವುದಿಲ್ಲ.  ಒಂದು ನಾಳವಿದ್ದಾಗ ಎಷ್ಟು ಕೆಡುಕಾಗಬಲ್ಲದೋ ಎರಡಿದ್ದರೂ ಅಷ್ಟೇ ಆಗುತ್ತದೆ.  ಈ ವ್ಯತ್ಯಾಸಗಳಲ್ಲಿ ಸಮಪಾಶ್ರ್ವತೆ ಇರುವುದಿಲ್ಲ.  ತೊಂದರೆಗಳಾಗದಿದ್ದರೆ ವ್ಯತ್ಯಾಸಗಳಿರುವುದೂ ತಿಳಿಯುವುದಿಲ್ಲ.  ಯೂರೊಸೆಲೆಕ್ಟಾನ್ ಎಂಬ ಚುಚ್ಚುಮದ್ದು ಕೊಟ್ಟು ಎಕ್ಸ್‍ಕಿರಣ ಛಾಯಾಚಿತ್ರವನ್ನು ತೆಗೆದಾಗ ವ್ಯತ್ಯಾಸಗಳಿರುವುದು ತಿಳಿಯುತ್ತದೆ. ಇಂದಿನ ದಿನಗಳಲ್ಲಿ ಶ್ರವಣಾತೀತ ಶಬ್ದ ಪ್ರತಿಫಲನದ ಚಿತ್ರ (ಅಲ್ಟ್ರಾಸೋನೋಗ್ರಾಫ್)ದ ಮೂಲಕ ಮೂತ್ರ ಪಿಂಡಗಳ, ಮೂತ್ರ ಪಿಂಡನಾಳಗಳ ರಚನೆ ಮತ್ತು ಅವುಗಳಲ್ಲಿಯ ಏರುಪೇರು ಗುರುತಿಸಲು ಸರಳ ಸಾಧ್ಯವಾಗಿದೆ.
(ಎಂ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ